ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ಸಿಹಿ ಸುದ್ದಿಯನ್ನು ನೀಡಲು ಸಿಎಂ ಮುಂದಾಗಿದ್ದಾರೆ. ನೌಕರರಿಗೆ ಶೇಕಡಾ 27ರಷ್ಟು ವೇತನ ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಸಲಹೆಯನ್ನೂ ಮೀರಿ ವೇತನ ಹೆಚ್ಚಳ ಮಾಡಲು ಸಿಎಂ ಒಲವು ತೋರಿದ್ದಾರೆ. ವೇತನ ಆಯೋಗದ ಶಿಫಾರಸುಗಳನ್ನು ಪೂರ್ಣಗೊಳಿಸುವ ಮಾತನ್ನಾಡಿರುವ ಸಿಎಂ ಸಿದ್ದರಾಮಯ್ಯ, 27%ರಷ್ಟು ವೇತನ ಹೆಚ್ಚಳ ಮಾಡಲು ಸೈ ಎಂದಿದ್ದಾರೆ. ನೌಕರರು ನಿರೀಕ್ಷೆ ಮಾಡಿದ ಹೆಚ್ಚಳ ಜಾರಿಯಾಗುವ ಸಾಧ್ಯತೆಯಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಂಪುಟ ಸಭೆ ಸಿಎಂಗೆ ಬಿಟ್ಟಿದೆ.
ಈ ಕುರಿತು ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಏಳನೇ ವೇತನ ಆಯೋಗ ಮಾರ್ಚ್ 16ರಂದು ಅಂತಿಮ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದ್ದ ಆಯೋಗ, ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು.
ವೇತನ ಹೆಚ್ಚಳಕ್ಕೆ ಷಡಾಕ್ಷರಿ ಸ್ವಾಗತ
ವೇತನ ಹೆಚ್ಚಳ ಪ್ರಸ್ತಾವವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಸ್ವಾಗತಿಸಿದ್ದಾರೆ. “ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ವೇತನ ಆಯೋಗ ನೀಡಿರುವ ಶಿಫಾರಸನ್ನು ಒಪ್ಪಿರುವ ಸಿಎಂ ನಡೆ ಸ್ವಾಗತಾರ್ಹವಾದುದು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಆಗುವುದಿಲ್ಲ. ರಾಜ್ಯದ ಖಜಾನೆಗೆ ಹೆಚ್ಚಿನ ಸಂಪನ್ಮೂಲದ ಒದಗಣೆ ಮತ್ತು ಹಂಚಿಕೆ ಸರ್ಕಾರಿ ನೌಕರರಿಂದಲೇ ಆಗುತ್ತದೆ” ಎಂದು ಷಡಾಕ್ಷರಿ ಹೇಳಿದ್ದಾರೆ.
ಸಂಪುಟ ಸಭೆಯಲ್ಲಿ ಏನೇನು ನಿರ್ಣಯ?
ಸಚಿವ ಸಂಪುಟ ಸಭೆಯಲ್ಲಿ ಒಟ್ಟು 20 ವಿಷಯಗಳ ಮೇಲೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್. ಕೆ ಪಾಟೀಲ್ ತಿಳಿಸಿದ್ದಾರೆ.
ವಾಣಿಜ್ಯ ಕೈಗಾರಿಕೆ ಇಲಾಖೆಗೆ ಸಂಬಂಧಿಸಿ- ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಅನುಮತಿ. ನಿಷ್ಕ್ರಿಯವಾಗಿದ್ದ 1304 ಎಕರೆ ಪ್ರದೇಶದಲ್ಲಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸಲು ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಮ್ಮತಿ. ಗಣಿ ಚಟುವಟಿಕೆಗಳ ಪ್ರಾರಂಭಕ್ಕೆ ಅನುಮತಿ ನೀಡಲು ಸಂಪುಟ ಗ್ರೀನ್ ಸಿಗ್ನಲ್. ಟೇನಿಂಗ್ ಡಂಪ್ಸ್ ಬಳಸಿಕೊಂಡು ಗಣಿ ಚಟುವಟಿಕೆ ಮುಂದುವರಿಸಲು ಅವಕಾಶ. 2230 ಎಕರೆ ಭೂಮಿಯನ್ನು ಸರ್ಕಾರಕ್ಕೆ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಕೆಜಿಎಫ್‌ನಿಂದ ಸರ್ಕಾರಕ್ಕೆ ನೀಡಬೇಕು. 25.24 ಕೋಟಿ ಸರ್ಕಾರಕ್ಕೆ ಪಾವತಿ ಮಾಡುವುದು ಬಾಕಿ ಇದೆ. ಅದನ್ನೂ ಭರಿಸುವಂತೆ ಭಾರತ್ ಮೈನಿಂಗ್ಸ್‌ಗೆ ಸೂಚನೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಡಿಯಲ್ಲಿ- ಸಂವಿಧಾನ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿಯಂದು ಕೇವಲ ಗಾಂಧಿ ಭಾವಚಿತ್ರ ಮಾತ್ರ ಇರುತ್ತಿತ್ತು. ಇನ್ನು ಮುಂದೆ ಈ ಎಲ್ಲ ಸಂದರ್ಭದಲ್ಲಿ ಅಂಬೇಡ್ಕರ್ ಭಾವ ಚಿತ್ರ ಇಡುವುದು ಕೂಡ ಕಡ್ಡಾಯ. ವಿಶ್ವ ವಿದ್ಯಾಲಯಗಳ ಅಭಿವೃದ್ದಿಗೆ 297.77 ಕೋಟಿ ಬಿಡುಗಡೆಗೆ ಕ್ಯಾಬಿನೆಟ್ ಅನುಮೋದನೆ.
ಶಿಕ್ಷಣ ಇಲಾಖೆಯ ಅಡಿಯಲ್ಲಿ- ಎಲ್ಲ ಸರ್ಕಾರಿ ಶಾಲೆ ಹಾಗೂ ಪದವಿ ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ನಿರ್ಧಾರ. 29.15 ಕೋಟಿ ಅಂದಾಜು ವೆಚ್ಚದಲ್ಲಿ 46,829 ಸರ್ಕಾರಿ ಶಾಲೆ, 1434 ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್, ಉಚಿತ ನೀರಿನ ಸೌಲಭ್ಯ. ಕ್ರೈಸ್ತ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅನುಮತಿ. ರೋಟರಿ ಸಂಸ್ಥೆಗೆ ಇದರ ಜವಾಬ್ದಾರಿ.
ಉಭಯ ಸದನಗಳ ಮಳೆಗಾಲದ ಅಧಿವೇಶನದ ದಿನಾಂಕವನ್ನು ನಿಗದಿ ಮಾಡುವ ವಿಚಾರ ಸಿಎಂ ವಿವೇಚನೆಗೆ ಬಿಡಲಾಗಿದೆ.
0 Response to ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ: 27% ವೇತನ ಹೆಚ್ಚಳಕ್ಕೆ ಮುಂದಾದ CM ಸಿದ್ದರಾಮಯ್ಯ
Post a Comment